ಕಣ್ಣಾಲಿಗಳು ತುಂಬಿಬಂದ ಕ್ಷಣ

ಏನೆಲ್ಲಾ ಆಗಿ ಹೋಯಿತು ಕೇವಲ ಮೂರು ನಾಲ್ಕು ತಿಂಗಳಲ್ಲಿ, ಯಾವುದೇ ಕೆಲಸಗಳು ಸಿಗುತ್ತಿಲ್ಲ, ಸಿಕ್ಕ ಕೆಲಸದಲ್ಲಿ ಯಾವುದೇ ಏಳಿಗೆಯಿಲ್ಲ, ನಾನು ಈ ಮೂರು ತಿಂಗಳಿಂದ ಪಟ್ಟ ಪಾಡು ಅಷ್ಟಿಷ್ಟಲ್ಲ. ಮೊದಲಿದ್ದ ಕಂಪೆನಿ ಮುಚ್ಚುತ್ತೇನೆ, ಅಂದಾಗ ನನ್ನ ಭವಿಷ್ಯದ ಯೋಚನೆ ಮಾಡುತ ಕಣ್ಣಾಲಿಗಳೇ ತುಂಬಿ ಬಂದವು. ನಾನು ನೋಡುತ್ತಿರುವಂತೆ ಸುಮಾರು ನಾಲ್ಕ್ಯೆದು ವರ್ಷಗಳಿಂದ ಒಂದಿಲ್ಲೊಂದು ಆಘಾತ ನನ್ನ ಜೀವನದಲ್ಲಿ, ಮೊದಲಿಗೆ ಕೆಲಸಗಳದ್ದು, ಇದ್ದಕ್ಕಿದ್ದಂತೆ ಕಂಪೆನಿಗಳು ಮುಚ್ಚುತ್ತದೆ. ಒಬ್ಬ ಹಣಕಾಸು ಮತ್ತು ವ್ಯವಹಾರದ ನಿರ್ವಹಕನಾಗಿದ್ದು ನನಗೆ ಕಂಪೆನಿಗಳ ಸ್ಥಿತಿಯನ್ನು ಅಳೆಯಲಾಗುತ್ತಿಲ್ಲ. ಚೆನ್ನಾಗಿ ಇರೋ ಕಂಪೆನಿ ಸೇರಿ ಕೆಲವೇ ದಿನಗಳಲ್ಲಿ ಮುಚ್ಚುತ್ತದೆ. ಕೇಳಿದರೆ ಹೇಳುವುದೊಂದೆ ಕಾರಣ ನಮಗೆ ಕಂಪೆನಿ ನಡೆಸಲಾಗುತ್ತಿಲ್ಲ.

ಕಳೆದ ವರ್ಷದಿಂದಲೇ ನಾನು ಯೋಚಿಸುವುದಾದರೆ ಮೊದಲಿಗಿದ್ದ ಡೆಲ್ ಕಂಪೆನಿಯಲ್ಲಿ ಕೆಲಸದ ಒತ್ತಡ ಎಷ್ಟೆ ಇದ್ದರೂ, ಅಲ್ಲಿ ನಾನು ಕೆಲಸ ಮಾಡುವುದು(ನನ್ನ ಮನಸ್ಸಿನಲ್ಲಾದ ಬಹುದೊಡ್ಡ ಗಾಯ) ಸಾಧ್ಯವಾಗುತ್ತಿಲ್ಲದ ಕಾರಣ ರೆಡ್ ಸೋಲ್ ಎಂಬ ಕಂಪೆನಿಗೆ ಸೇರಿದೆ. ಅಲ್ಲಿ ಕೇವಲ ಒಂದು ತಿಂಗಳು ೧೦ ದಿನವಷ್ಟೆ. ಕಂಪೆನಿಯಲ್ಲಿನ ಬೋಳೆತನವನ್ನು ಸರಿಮಾಡಲು ಹೋಗಿ ಅಲ್ಲಿಂದ ಹೊರಟು ಬರುವಂತಾಯಿತು. ಇನ್ನೂ ಸ್ವಲ್ಪ ದಿನದಲ್ಲೇ ಮತ್ತೊಂದು ಕೆಲಸ ಸಿಕ್ಕಿತು. ಕ್ಯಾಮೋ ಅದೊಂದು ತಂತ್ರಾಂಶ ಮತ್ತು ಅಭಿವೃದ್ದಿಯನ್ನು ನಿರ್ವಹಿಸುವ ಸಂಸ್ಥೆ ಅದರ ಅಂಗ ಸಂಸ್ಥೆಗಳಾದ ಕ್ಯಾಮೋ ಟೆಕ್ ಮತ್ತು ಸ್ಯಾಗಾಮೋರ್ ಎಂಬ ಕಂಪೆನಿಯಲ್ಲಿ ಮತ್ತೆ ಕೆಲಸ ಸೇರಿದ್ದಾಯಿತು, ಚೆನ್ನಾಗಿಯೇ ನಡೆದುಕೊಂಡು ಬಂದ ಕಂಪೆನಿ ಇದ್ದಕ್ಕಿದ್ದಂತೆ ಕಂಪೆನಿಯಲ್ಲಿ ನಷ್ಟ ಶುರುವಾಯಿತೆಂಬ ಕಾರಣ ಹೇಳಿ, ಮಾರ್ಚ್ ೩೧ಕ್ಕೆ ಎಲ್ಲರನ್ನೂ ಮನೆಗೆ ಕಳಿಸಿದ್ದಾಯಿತು.

ಇಲ್ಲಿಂದ ಶುರುವಾಯಿತು ನನ್ನ ಜೀವನದ ಏರು ಪೇರುಗಳು ಸುಮಾರು ಒಂದು ತಿಂಗಳ ನಂತರ ಮತ್ತೊಂದು ಕಂಪೆನಿ ಸೇರಿದೆ, ಟ್ರಾನ್ಸ್ ಪ್ರೋ ಅಂತಾ, ಕಂಪೆನಿಯಲ್ಲಿ ನನಗೆ ಹಣಕಾಸು ಮತ್ತು ವ್ಯವಹಾರದ ಮುಖ್ಯಸ್ಥನಾಗಿ ಜವಾಬ್ದಾರಿಯನ್ನು ಕೊಟ್ಟರು, ಮೊದಲಿಗೆ ಮುಖ್ಯಸ್ಥನೆಂಬ ಅಹಂಭಾವ ನನ್ನಲ್ಲಿದ್ದರೂ, ಕಂಪೆನಿಯ ಆಡಳಿತಾತ್ಮಕ ನ್ಯೂನ್ಯತೆಗಳು, ಮತ್ತು ಅಕೌಂಟ್ಸ್ ಮತ್ತು ಫ್ಯೆನಾನ್ಸಿನಲ್ಲಾಗಿದ್ದ ತಂತ್ರಾಂಶ ಸವಕಲುಗಳನ್ನು ಸರಿಮಾಡಲು ಹೋಗಿದ್ದೇ ತಪ್ಪಾಯಿತು, ಅದುವೆರೆಗೂ ಎಲ್ಲಾ ಸರಿಯಿತ್ತು. ನನಗೆ ಇದೇ ಸಮಯದಲ್ಲಿ ಎಂ.ಕಾಂನ ಪರೀಕ್ಷೆಗಳು ಶುರುವಾಯಿತು. ನಾನು ಪರೀಕ್ಷೆ ಕಟ್ಟಲು ಪಟ್ಟ ಪಾಡು ಎರಡು ವರ್ಷಗಳಿಂದ ನನಗೆ ಗೊತ್ತು. ಅಂತದುದರಲ್ಲಿ ಹೇಗೋ ಕಷ್ಟಪಟ್ಟು ಹಣ ಹೊಂದಿಸಿ ಕಟ್ಟಿದ ಪರೀಕ್ಷೆಗೆ ಹೋಗದಿದ್ದರೆ ಹೇಗೆ ? ಅದಕ್ಕೆ ಪರೀಕ್ಷೆಯ ವೇಳಾಪಟ್ಟಿ ಸಿಕ್ಕಿದ ತಕ್ಷಣ ಕಂಪೆನಿಯ ಎಚ್. ಆರ್.ಗೆ ಮಿಂಚಂಚೆ ಮೂಲಕ ವಿಷಯವನ್ನು ತಿಳಿಸಿದೆ (ಅದು ೨೫ ದಿನಗಳ ಮುಂಚೆಯೇ) ಆಮೇಲೆ ಪರೀಕ್ಷೆಯ ಕಡೆ ಗಮನ ಹಾಗೂ ಕೆಲಸದ ಸಮಯದಲ್ಲಿನ ಯೋಚನೆಗಳಿಗಷ್ಟೆ ನನ್ನನ್ನು ಸೀಮಿತಗೊಳಿಸಿದೆ. ಇದ್ದಕ್ಕಿದ್ದಂತೆ ನಾನು ಪರೀಕ್ಷೆಗೆ ರಜೆ ಕೇಳಿದೆಯೆಂದು ಇಲ್ಲಸಲ್ಲದ ಆರೋಪವನ್ನು ಹೊರೆಸಿದರು, ಸರಿ ಆದದ್ದು ಆಯಿತು ಬಿಡು,ಇನ್ನು ಪರೀಕ್ಷೆಗಳು ಮುಗಿದಿವೆ.ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಯವನ್ನು ಕೆಲಸದ ಮೇಲೆ ಮೀಸಲಿರಿಸೋಣವೆಂದು ಯೋಚಿಸುತಿರುವಾಗಲೇ ಕಂಪೆನಿಯ ಕನ್ಸಲ್ಟೆಂಟ್ ಆಗಿರುವ ಶ್ರೀಧರ್ ಎಂಬ ವ್ಯಕ್ತಿ, ತನಗೆ ತಾನೇ ಎಲ್ಲವನ್ನೂ ಬಲ್ಲವನೆಂದೂ...... ಹಾಗೂ ನಾನು ಪರೀಕ್ಷೆಗೆ ಹೇಳದೆ ರಜೆ ತೆಗೆದುಕೊಂಡನೆಂದೂ............, ನನ್ನ ಬಟ್ಟೆ ಬರೆ ಸರಿಯಿಲ್ಲವೆಂದೂ........ನಾನು ಇನ್ನಿತರ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲಿಲ್ಲವೆಂದೂ......... ಆರೋಪಿಸಿ ಇದೇ ಜುಲ್ಯೆ ೧ ರಂದು ಇನ್ನು ಉಳಿದ ಹದಿನ್ಯೆದು ದಿನಗಳಲ್ಲಿ ನಾನು ಬೇರೆ ಕೆಲಸವನ್ನು ನೋಡಿಕೊಳ್ಳಬೇಕೆಂದು ಮಿಂಚಂಚೆಯನ್ನು ಕಳಿಸಿದ್ದಾಯಿತು.

ಒಂದು ಕಂಪೆನಿಯಲ್ಲಿ ಒಬ್ಬ ಕೆಲಸಗಾರ ಬೇಕಾದರೆ ಹೇಗೆಲ್ಲಾ ಪರಿಪರಿಯಾಗಿ ನಾಟಕೀಯತೆಯನ್ನು ಪ್ರಾರಂಭಿಸುತ್ತಾರೆ, ಹಾಗೇ ಒಂದು ವ್ಯವಸ್ಥಿತ ಸಂಚಿಗೆ ಒಬ್ಬ ನೌಕರ ಹೇಗೆಲ್ಲಾ ಹೊಣೆಗೇಡಿಯನ್ನಾಗಿ ಮಾಡುತ್ತಾರೆಂದು ನನಗೆ ಆದ ಅನುಭವ ಅನನ್ಯ ಮತ್ತು ವರ್ಣಾತೀತ.

ಇದುವರೆಗೂ ಕೆಲಸವೊಂದೇ ನನ್ನ ಜೀವನ ಎಂದು ತಿಳಿದು ಎಲ್ಲರನ್ನೂ (ಬಂಧು ಬಾಂಧವರು) ಅದರಿಂದಲೇ ದೂರ ಮಾಡಿಕೊಂಡ ನನಗೆ ಹೀಗೊಂದು ವ್ಯವಸ್ಥಿತ ವಂಚನೆಯ ಸುಳಿಗೆ ಸಿಲುಕಿದ ನನ್ನ ಜೀವನದ ಮುಂದಿನ ಹೆಜ್ಜೆಗಳೇ ಮಸುಕಾಗಿದೆ. ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುವುದು ಹೇಗೆ ? ಒಂದೆಡೆ ವಯಸ್ಸಾದ ತಂದೆ ತಾಯಿ, ಮತ್ತೊಂದೆಡೆ ನನ್ನ ಓದು ಅಭ್ಯಾಸ, ಹಾಗೂ ಕೆಲಸವನ್ನು ಹುಡುಕುವ ಯೋಚನೆ ಮತ್ತು ಯೋಜನೆಗಳು............ ಎಲ್ಲವೂ ಗೋಜಲು ಗೋಜಲುಗಳೇ.

ಒಮ್ಮೆ ಒಂದು ಕಂಪೆನಿಯಲ್ಲಿ ಹೀಗಾದರೆ ಹೇಗೋ ಸುಧಾರಿಸಬಹುದು, ಆದರೆ ಪ್ರತಿ ಸಲದ ಕಂಪೆನಿಗಳು ನನ್ನ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತಿದ್ದರೆ ಹೇಗೆ ಸಹಿಸಕೊಳ್ಳುವುದು. ಎಲ್ಲವೂ ವಿಚಿತ್ರ ಸನ್ನಿವೇಶ, ಧನಾತ್ಮಕವಾಗಿ ಯೋಚಿಸಿ ಇನ್ನೊಂದು ಕೆಲಸ ಸಿಗುತ್ತದೆಂಬ ಆಶಾಭಾವವೇ ಉಡುಗಿಹೋದಂತಾಗಿದೆ. ಇದಕ್ಕೆ ಪರಿಹಾರ ಎಂತು ?

ನನ್ನ ಸಾದಾ ಸೀದತನ ನ್ಯಾಯಯುತ ಧೋರಣೆ ಮತ್ತೊಬ್ಬರ ಕಣ್ಣಿಗೆ ತಪ್ಪಾಗಿ ಕಂಡರೆ ನಾನು ನನ್ನನ್ನೇ ತಿದ್ದಿಕೊಳ್ಳುವ ಪರಿ ಏನು ? ಇದಕ್ಕೆಲ್ಲಾ ಕಾಲವೋ ಮತ್ತೊಂದೋ ಎಂಬ ವ್ಯವಸ್ಥೆಯ ಮೇಲೆ ಹಾಕೋಣವೂ ಇಲ್ಲ. ಮೊದಲಿಗೆ ನನ್ನ ಇಷ್ಟು ಒರಟನನ್ನಾಗಿ ಮಾಡಿದ್ದು ಯಾವುದು ? ಇದೇ ಕಾಲವಲ್ಲವೇ ? ಇದೇ ಮನುಷ್ಯರ ನೀಚ ಯೋಚನೆಗಳಲ್ಲವೇ ? ಇದೇ ಮೋಸ, ವಂಚೆನೆಗಳಲ್ಲವೇ ? ಎಲ್ಲವೂ ನನ್ನ ನೇರಕ್ಕೆ ನೋಡಬಾರದೆಂದು ಗೊತ್ತಿದೆ. ಹಾಗೇ ಪ್ರತಿ ಸಾರಿ ಮತ್ತೊಬ್ಬರ ಯೋಚೆನೆಗೆ ಬೆಲೆಕೊಟ್ಟು ಅವರ ಅಭಿಪ್ರಾಯಗಳಿಗೆ ಒತ್ತುಕೊಟ್ಟು, ಎಲ್ಲೋ ನಾನು ನಾನಾಗಿಲ್ಲವೆನ್ನಿಸುತ್ತದೆ. ಹಾಗೇ ನನ್ನಲ್ಲಿನ ತಪ್ಪುಗಳು ಯಾವುವು ? ಇವೆಲ್ಲಾ ಉತ್ತರಿಸಲಾಗದ ಪ್ರಶ್ನೆಗಳೇ ಆಗಿಹೋಗಿವೆ.